ಫೂಕ್ಯೆನ್
ಚೀನಾದೇಶದ ಆಗ್ನೇಯ ತೀರದಲ್ಲಿರುವ ಒಂದು ಪ್ರಾಂತ್ಯ. ಟೈವಾನ್ ದ್ವೀಪಕ್ಕೆ ವಾಯವ್ಯದಲ್ಲಿರುವ ಈ ಪ್ರಾಂತ್ಯವನ್ನು ಉತ್ತರದಲ್ಲಿ ಜಜಿಯಂಗ್ ಪಶ್ಚಿಮದಲ್ಲಿ ಜಿಯಾಂಗ್ಸೀ ನೈಋತ್ಯದಲ್ಲಿ ಗ್ವಾಂಗ್‍ಡುಂಗ್ ಪ್ರಾಂತ್ಯಗಳೂ ಈಶಾನ್ಯ ಮತ್ತು ಆಗ್ನೇಯದಲ್ಲಿ ಪೂರ್ವಚೀನಾ ಮತ್ತು ದಕ್ಷಿಣಚೀನಾ ಸಮುದ್ರವೂ, ಪೂರ್ವದಲ್ಲಿ ಫಾರ್ಮೋಸಾ ಜಲಸಂಧಿಯೂ ಸುತ್ತುವರೆದಿವೆ. ಚೀನಾದ ಸಣ್ಣಪ್ರಾಂತ್ಯಗಳಲ್ಲೊಂದಾದ ಇದು ದ.ಅ. 15(-22(ಯಲ್ಲೂ ಪೂ.ರೇ. 174(ಯಿಂದ ಪ.ರೇ 177( ನಡುವೆ ಇದೆ. ಆಯಕಟ್ಟಿನ ಸ್ಥಳವಾಗಿರುವ ಈ ಪ್ರಾಂತ್ಯದ ವಿಸ್ತೀರ್ಣ 1,23,000ಚ.ಕಿ.ಮೀ. ಜನಸಂಖ್ಯೆ 18,000,000 (1970). ಪ್ರಾಂತ್ಯದ ಆಡಳಿತ ಕೇಂದ್ರ ಫೂ ಚೌ.

	ಮೇಲ್ಮೈಲಕ್ಷಣ: ಶೇಕಡಾ ಸುಮಾರು 25ರಷ್ಟು ಭಾಗ ಪರ್ವತ ಪ್ರದೇಶಗಳಿಂದ ಕೂಡಿದೆ. ಸಮುದ್ರತೀರಕ್ಕೆ ಸಮಾಂತರವಾಗಿ ನೈಋತ್ಯದಿಂದ ಈಶಾನ್ಯದ ಕಡೆಗೆ ಹಬ್ಬಿರುವ ಈ ಪರ್ವತಶ್ರೇಣಿಗಳು ಪುರಾತನ ಪರ್ವತವ್ಯೂಹಕ್ಕೆ ಸೇರಿವೆ. ಇದರ ಫೂಕ್ಯೆನ್-ಜಜಿಯಾಂಗ್ ಭಾಗ ಮಡಿಕೆ ಹೊದಿಕೆಗಳಿಂದ ಕೂಡಿದ ಗುಂಪು ಶಿಖರಗಳಿಂದ ಕೂಡಿದೆ. ಫೂಕ್ಯೆನ್ ಮತ್ತು ಚೀನಾದ ಒಳಭಾಗಗಳ ನಡುವೆ ಪ್ರಕೃತಿದತ್ತ ಅಡ್ಡಗಟ್ಟೆಯಾಗಿರುವ ಉ-ಇಷಾನ್ ಪರ್ವತಗಳು ಪಶ್ಚಿಮ ಫುಕ್ಯೆನ್ ಹಾಗೂ ನೈಋತ್ಯ ಜಜಿಯಾಂಗ್ ಪ್ರದೇಶಗಳಲ್ಲಿ 1830 ಮೀ ಎತ್ತರವಿದೆ. ಫೂಕ್ಯೆನ್ ಪ್ರಾಂತ್ಯದ ಪರ್ವತಗಳು ಒಳಭಾಗದಲ್ಲಿ ಒತ್ತೊತ್ತಾಗಿದ್ದು ತೀರಪ್ರದೇಶದೆಡೆಗೆ ಬಂದೆಂತೆಲ್ಲ ವಿಶಾಲವಾಗುತ್ತವೆ. ಪರ್ವತಗಳುದ್ದಕ್ಕೂ ಅನೇಕ ಸ್ತರಗಳಿದ್ದು ಭೂಮಿ ಏರುತಗ್ಗುಗಳಿಂದ ಕೂಡಿದೆ. ಇಲ್ಲಿಯ ಭೂಮಿ ಸಾಧಾರಣವಾಗಿ ವಾಯವ್ಯದಿಂದ ಆಗ್ನೇಯದೆಡೆಗೆ ಇಳಿಜಾರಾಗಿದ್ದು ಅನೇಕ ನದಿಗಳಿಂದ ಕೂಡಿದೆ. ಮಿನ್ ಆಫ್ ಫೂಕ್ಯೆನ್ ನೀರಾವರಿ ಪ್ರದೇಶ ಈ ಪ್ರಾಂತ್ಯದ ಸುಮಾರು ಅರ್ಧ ಭಾಗವನ್ನು ಆವರಿಸಿದೆ. ಇಲ್ಲಿ ಹರಿಯುವ ಮೂರುನದಿಗಳ ಪೈಕಿ ದೊಡ್ಡ ನದಿಯಾದ ಚಿಯಾಂಗ್‍ಚಿ ಫೂಕ್ಯೆನ್-ಜಜಿಯಾಂಗ್ ಗಡಿಯಲ್ಲಿ ಹುಟ್ಟಿ ಉತ್ತರದಿಕ್ಕಿಗೆ ಹರಿಯುತ್ತದೆ. ಎರಡನೆಯ ಮಿನ್-ಫು-ಟುನ್‍ಚಿ ನದಿ ಉ-ಇಷಾನ್ ಇಳಿಜಾರು ಪ್ರದೇಶದಲ್ಲಿ ಹರಿಯುವುದು.

	ಉ-ಇ ಪರ್ವತಗಳಲ್ಲಿ ಹುಟ್ಟುವ ಶಾಚಿ ಮೂರನೆಯ ನದಿ. ಈ ಮೂರು ನದಿಗಳೂ ಕ್ರಮವಾಗಿ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಿಂದ ಹರಿದು ಬಂದು ನಾನ್‍ಪಿನಿನಲ್ಲಿ ಸಂಗಮವಾಗಿ ಮುಂದೆ ಮಿನ್-ಚಿ ಯಾಂಗ್ ಎಂಬ ಹೆಸರಿನಿಂದ ಫೂಚೌ ನಗರದ ಆಗ್ನೇಯ ಭಾಗದಲ್ಲಿ ಹರಿದು ಚೀನಿ ಸಮುದ್ರ ಸೇರುತ್ತದೆ. ಮಿನ್ನಿನ ದಕ್ಷಿಣಕ್ಕೆ ಚಿಯು ಲುಂಗ್ ಮತ್ತು ಚಿನ್‍ಚಿಯಾಂಗ್ ನದಿಗಳಿವೆ. ಮಿನ್ನಿನ ನೈಋತ್ಯದಲ್ಲಿ ಹರಿಯುವ ಹಾನ್ ಚಿಯಾಂಗ್ ನದಿ ಫೂಕ್ಯೆನ್ ಪ್ರಾಂತ್ಯದ ನೈಋತ್ಯ ಗಡಿಯನ್ನು ದಾಟಿ ಸ್ಟಾಟೋ ಬಂದರಿನಲ್ಲಿ ಸಮುದ್ರವನ್ನು ಸೇರುತ್ತದೆ. ಫೂಕ್ಯೆನಿನಲ್ಲಿಯ ನದಿಗಳು ಅನೇಕ ಶತಮಾನಗಳಿಂದ ಸಂಚಾರ ಮಾರ್ಗಗಳಾಗಿದ್ದು ಬಹಳ ಪ್ರಾಮುಖ್ಯ ಪಡೆದಿವೆ. ನದಿಗಳು ಅಳಿವೆಗಳ ಮೂಲಕ ಸಮುದ್ರ ಸೇರುವುದರಿಂದ ಸ್ವಾಭಾವಿಕ ಬಂದರುಗಳಾಗಿವೆ.

	ಫೂಕ್ಯೆನಿನಲ್ಲಿ ಮುಳುಗಡೆಯಾಗಿರುವ ಬಂಡೆಗಳಿಂದ ಕೂಡಿದ ತೀರಪ್ರದೇಶವಿದ್ದು ಅನೇಕ ದ್ವೀಪಗಳೂ ಪರ್ಯಾಯದ್ವೀಪಗಳೂ ಭೂಶಿರಗಳೂ ಕೊಲ್ಲಿಗಳೂ ಬಂದರುಗಳೂ ಇವೆ. ತೀರ ಅಂಕುಡೊಂಕಾಗಿದ್ದು ಅದರ ಒಟ್ಟು ಉದ್ದ 2705ಕಿಮೀಗಳಷ್ಟಿದೆ. ಇಲ್ಲಿಯ ದ್ವೀಪಗಳಲ್ಲಿ ದಕ್ಷಿಣದ ಕ್ವಿಮಾಯ್ ಉತ್ತರದ ಷ-ಮನ್‍ಟಾವ್ ಮುಖ್ಯವಾದವು.

	ವಾಯುಗುಣ: ಫೂಕ್ಯೆನ್ ಪ್ರಾಂತ್ಯ ಕರ್ಕಾಟಕ ಸಂಕ್ರಾಂತಿವೃತ್ತಕ್ಕೆ ಸಮೀಪದಲ್ಲಿದೆ ಇದರ ತೀರಪ್ರದೇಶದಲ್ಲಿ ಉಷ್ಣವಲಯದ ಹವೆಯಿದ್ದು ಬೇಸಿಗೆಯಲ್ಲಿ ಅತಿಹೆಚ್ಚು. ಸೆಕೆಯೂ ಚಳಿಗಾಲದಲ್ಲಿ ತಂಪೂ ಇರುತ್ತವೆ. ವಾಯುವ್ಯ ಭಾಗದ ಪರ್ವತಪ್ರದೇಶದಲ್ಲಿ ಸಮಶೀತೋಷ್ಣ ಹವೆÀ ಇದ್ದರೂ ಚಳಿಗಾಲದಲ್ಲಿ ಚಳಿ ಬಹಳ ಹೆಚ್ಚು. ಫೊಚೌನಲ್ಲಿನ ಸರಾಸರಿ ಉಷ್ಣತೆ ಜುಲೈನಲ್ಲಿ ಸುಮಾರು 29(ಅ ಇದ್ದರೆ ಜನವರಿಯಲ್ಲಿ 12( ಅ ಇರುತ್ತದೆ. ಈ ಪ್ರಾಂತ್ಯದಲ್ಲಿ ನವೆಂಬರಿನಿಂದ ಫೆಬ್ರವರಿತನಕ ಚಳಿಗಾಲವೂ ಮಾರ್ಚಿಯಿಂದ ಮೇ ತನಕ ಬೆಚ್ಚನೆಯ ಮತ್ತು ಜೂನಿನಿಂದ ಅಕ್ಟೋಬರ್ ತನಕ ತೀವ್ರ ಬಿಸಿಲಿನ ಹವವೂ ಇರುತ್ತವೆ. ಸಮುದ್ರದ ಕಡೆಯಿಂದ ಬೀಸುವ ಮಾನ್‍ಸೂನ್ ಮಾರುತಗಳು ಈ ಪ್ರಾಂತ್ಯಕ್ಕೆ ಹೆಚ್ಚು ಮಳೆ ತರುತ್ತವೆ. ಸರಾಸರಿ ವಾರ್ಷಿಕ ಮಳೆ 12,700ಮಿ ಮೀಗಳಿಂದ 20,300 ಮಿಮೀ. ತೀರದೆಡೆಯಿಂದ ಪಶ್ಚಿಮದ ಪರ್ವತಗಳೆಡೆಗೆ ಹೋದಂತೆಲ್ಲ ಮಳೆ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹಿಮಪಾತವಿರುತ್ತದೆ. ಬೇಸಿಗೆಯ ಕೊನೆಯಭಾಗ ಮತ್ತು ಶರತ್ಕಾಲದ ಮೊದಲ ಭಾಗದಲ್ಲಿ ತೀರಪ್ರದೇಶದಲ್ಲಿ ಬಿರುಗಾಳಿ ಬೀಸುವುದುಂಟು. 

	ಸಸ್ಯ ಮತ್ತು ಪ್ರಾಣಿಸಂಪತ್ತು: ಇಲ್ಲಿಯ ಸಸ್ಯಸಂಪತ್ತು ವೈವಿಧ್ಯಮಯ ಇಲ್ಲಿ ಉಷ್ಣವಲಯದ ಕಾಡುಗಳೂ ಶೀತ ಹಾಗೂ ಸಮಶೀತೋಷ್ಣವಲಯದ ಸಸ್ಯಗಳೂ ಉಂಟು. ಒಳಭಾಗಗಳಲ್ಲಿ ದಟ್ಟವಾದ ಕಾಡುಗಳಿವೆ. ಪರ್ವತ ಪ್ರದೇಶಗಳಲ್ಲಿ ಭೂಮಿ ಬೂದು-ಕಂದು ಬಣ್ಣದ್ದಾಗಿದ್ದು ಫಲವತ್ತಾಗಿದೆ. ಕೆಳ ಭಾಗದ ಗುಡ್ಡಗಳು ಹಾಗೂ ನೆಲ ಎತ್ತರ ಇರುವ ಜಾಗಗಳಲ್ಲಿ ಕೆಂಪು ಮಣ್ಣಿನ ಭೂಮಿಯಿದೆ. ತೀರಪ್ರದೇಶ ಜೌಗು ಪ್ರದೇಶದಿಂದ ಕೂಡಿದ್ದು ಬಿಳಿಯ ಚೌಳು ಹಾಗೂ ಉಪ್ಪಿನಿಂದ ಕೂಡಿದೆ. ಭೂಮಿಯಲ್ಲಿಯ ಕ್ಷಾರವನ್ನು ಕಡಿಮೆಗೊಳಿಸಿ ಅನೇಕ ಕಡೆ ಬತ್ತವನ್ನು ಬೆಳೆಸುತ್ತಿದ್ದಾರೆ. ಇಲ್ಲಿಯ ಪ್ರಾಣಿ ಸಂಪತ್ತು ವಿಪುಲವಾಗಿದ್ದು ಪರ್ವತ ಪ್ರದೇಶದ ಒಳಭಾಗದಲ್ಲಿ ಹುಲಿಗಳೂ ಇವೆ. 

	ಜನಜೀವನ: ಶೇಕಡಾ 99 ಭಾಗ ಚೀನಿಯರೇ ಇದ್ದಾರೆ. ಇವರಲ್ಲಿ ಬುಡಕಟ್ಟಿಗೆ ಸೇರಿದವರ ಸಂಖ್ಯೆ ಅತಿದೊಡ್ಡದು ಇತರ ಬುಡಕಟ್ಟುಗಳೆಂದರೆ ಮಿಯಾವೊ, ಹುಯಿ ಮತ್ತು ಮಂಚು, ಮಿಯಾವೊ ಜನ ಉತ್ತರ ಫೂಕ್ಯೇನಿನ ಪರ್ವತಪ್ರದೇಶದ ಒಳಭಾಗದಲ್ಲೂ ಹುಯಿ ಜನರು ಫೊಚೌ ಅಮಾಯ್ ಮತ್ತು ಚುವಾನ್-ಚೌಗಳಲ್ಲೂ ವಾಸಿಸುತ್ತಿದ್ದಾರೆ. ಮಂಚುಗಳು ಚಿಯಾನ್ ವಂಶದ ಆಳ್ವಿಕೆಯ ಕಾಲದಲ್ಲಿ ದುರ್ಗಗಳ ರಕ್ಷಣೆಗಿದ್ದ ಸೈನಿಕರ ವಂಶಕ್ಕೆ ಸೇರಿದ್ದು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಪ ಸಂಖ್ಯಾತ ಜನಾಂಗಗಳು ಪ್ರಾಂತ್ಯದಲ್ಲೆಲ್ಲ ಚದರಿಹೋಗಿದ್ದು ಅವರಿಗಾಗಿ ಪ್ರತ್ಯೇಕ ಸ್ವಾಯತ್ತ ವಿಭಾಗವಿಲ್ಲದಿದ್ದರೂ ಅವರಿಗೆ ಸ್ಥಳೀಯ ಆಡಳಿತದ ಎಲ್ಲ ಹಂತಗಳಲ್ಲೂ ಪ್ರಾತಿನಿಧ್ಯ ಕೊಡಲಾಗಿದೆ. 1912ರಿಂದ ಅಲ್ಪಸಂಖ್ಯಾತರ ವಿರುದ್ದ ಯಾವುದೇ ರೀತಿಯ ಪಕ್ಷಪಾತ ತೋರಿಸುವುದನ್ನು ನಿಷೇದಿಸಲಾಗಿದೆ. ಹೊಕ್‍ಚಿಯು ಪ್ರಮುಖ ಭಾಷೆ. ಜೊತೆಗೆ ಹೂಕೆನ್, ಫೂಕ್‍ಚಿಯ ಅಥವಾ ಹಕ್ಕ ಮತ್ತು ಹೆನ್‍ಗುವ ಭಾಷೆಗಳು ಉಪಯೋಗದಲ್ಲಿವೆ. ರಾಷ್ಟ್ರಭಾಷೆಯಾದ ಕೋ ಯು ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಕಡ್ಡಾಯವಾಗಿದ್ದು ಯುವ ಜನಾಂಗ ಇದನ್ನೇ ಹೆಚ್ಚಾಗಿ ವ್ಯವಹಾರದಲ್ಲಿ ಉಪಯೋಗಿಸುತ್ತಾರೆ. ಇದಕ್ಕೆ ಮೊದಲು ಚೀನೀ ಬರಹದ ಭಾಷೆಯಾದ ಹಾನ್-ವೆನ್ ಕ್ರಿ. ಪೂ. 221 ರಿಂದ ಫೂಕ್ಯೇನ್‍ನಲ್ಲಿಯೇ ಅಲ್ಲದೆ ಇತರ ಚೀನೀ ಪ್ರಾಂತ್ಯಗಳಲ್ಲೂ ಬಳಕೆಯಲ್ಲಿದ್ದಿತು. ಸುಂಗ್ ಕಾಲದಲ್ಲಿ ಕ್ರಿ. ಶ. 10-13ಶತಮಾನ ಸಾಂಪ್ರದಾಯಿಕ ಚೀನೀ ಸಂಸ್ಕøತಿ ಈ ಪ್ರಾಂತ್ಯದಲ್ಲಿ ಅತ್ಯುಚ್ಛಮಟ್ಟವನ್ನು ಹೊಂದಿದ್ದಿತು. ಇತರ ಪ್ರಾಂತ್ಯಗಳೊಡನೆ ಹೋಲಿಸಿದರೆ ಫೂಕ್ಯೆನ್ ಪ್ರಾಂತ್ಯದ ಆಧುನೀಕರಣ ಮಂದಗತಿಯಲ್ಲಿಯೇ ಸಾಗಿದೆಯೆನ್ನಬಹುದು. 

ಚರಿತ್ರೆ: ಫೂಕ್ಯೆನ್ ಎಂದರೆ ಸಂತಸದ ನೆಲೆ ಎಂದರ್ಥ. ಚೌ ವಂಶದ ಆಡಳಿತ ಕಾಲದಲ್ಲಿ (ಕ್ರಿ.ಪೂ. 12-3 ಶತಮಾನ) ಇಲ್ಲಿ ವಾಸವಾಗಿದ್ದ ಏಳು ಮಿನ್ ಬುಡಕಟ್ಟುಗಳಿಂದ ಈ ಪ್ರಾಂತ್ಯಕ್ಕೆ ಮಿನ್‍ಷೆಂಗ್ ಎಂದೂ ಹೆಸರಿದೆ. ಚಿನ್ ವಂಶದ ಆಡಳಿತ ಕಾಲದಲ್ಲಿ ಇದನ್ನು ಮಿನ್ ಚುಂಗ್ ಪ್ರಾಂತ್ಯವೆಂದು ಕರೆಯಲಾಗುತಿತ್ತು. ಸುಂಗ್ ವಂಶದ ಕಾಲದಲ್ಲಿ ಇದಕ್ಕೆ ಫೂಕ್ಯೆನ್ ಎಂದು ಹೆಸರಾಗಿ ಭೌಗೋಳಿಕ ಗಡಿಗಳ ನಿರ್ಧಾರವಾಯಿತು. ಕ್ರಿಪೂ 12ನೆಯ ಶತಮಾನದಲ್ಲಿ ರಚಿತವಾದ ಚೌಲೀ ಮಹಾಕಾವ್ಯದಲ್ಲಿ ಈ ಪ್ರಾಂತ್ಯದ ಪ್ರಸ್ತಾಪ ಉಂಟು. ಅನಂತರ ಕ್ರಿ. ಶ. 5ನೆಯ ಶತಮಾನದಲ್ಲಿ ದಕ್ಷಿಣ ಸುಂಗ್ ರಾಜವಂಶದ ಆದಿಪತ್ಯಕ್ಕೂ ಕ್ರಿ.ಶ. 6ನೆಯ ಶತಮಾನದಲ್ಲಿ, ಲಿಯಾಂಗ್ ವಂಶದವರ ಆಧಿಪತ್ಯಕ್ಕೂ ಅನಂತರ 7ರಿಂದ10ನೆಯ ಶತಮಾನದತನಕ ಟಾಂಗ್ ವಂಶದವರ ವಂಶದವರ ಆಳ್ವಿಕೆಗೊಳಪಟ್ಟಿದ್ದಿತು. 

	1842ರಲ್ಲಿ ಬ್ರಿಟನ್ನಿನೊಡನೆ ನಡೆದ ಅಫೀಮು ಯುದ್ದದ ಅನಂತರ ನಾನ್‍ಕಿಂಗ್ ಒಪ್ಪಂದವಾಗಿ ಫೂಚೌ ಮತ್ತು ಅಮಾಯ್‍ಗಳನ್ನು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ತೆರೆಯಲಾಯಿತು. 1949ರಲ್ಲಿ ಫೂಕ್ಯೆನ್ ಪ್ರಾಂತ್ಯವನ್ನು ಜನತಾ ವಿಮೋಚನೆ ಸೈನ್ಯ ತನ್ನ ವಶಕ್ಕೆ ತೆಗೆದುಕೊಂಡಿತಾದರೂ ಹತ್ತಿರದ ಕೆಲವು ದ್ವೀಪಗಳು ಇಂದಿಗೂ ರಾಷ್ಟ್ರೀಯತಾವಾದಿಗಳ ವಶದಲ್ಲಿವೆ. 

	ಆಡಳಿತ: ಫೂಕ್ಯೆನ್ ಪ್ರಾಂತ್ಯವನ್ನು 9 ಘಟಕಗಳನ್ನು ವಿಭಾಗಿಸಲಾಗಿದ್ದು ಅವುಗಳಲ್ಲಿ 7 ಜಿಲ್ಲೆಗಳೂ 2 ಮುನಿಸಿಪಾಲಿಟಿಗಳೂ ಸೇರಿವೆ. ಈ 7 ಜಿಲ್ಲೆಗಳನ್ನು ಮತ್ತೆ 62 ತಾಲ್ಲೂಕುಗಳಾಗಿ ವಿಭಾಗಿಸಲಾಗಿದೆ. ಈ ತಾಲ್ಲೂಕುಗಳು ಕೌಂಟಿ ಮಟ್ಟದ್ದಾಗಿರುತ್ತವೆ. 2 ಮುನಿಸಿ ಪಾಲಿಟಿಗಳಾದ ಫೂಚೌ ಮತ್ತು ಸಿಯಾಮೆನುಗಳನ್ನು ಮತ್ತೆ 4 ಕೌಂಟಿ ಮಟ್ಟದ ಮುನಿಸಿಪಾಲಿಟಿಗಳಾಗಿ ವಿಭಜಿಸಲಾಗಿದೆ. 1958 ರಿಂದೀಚೆಗೆ ತಾಲ್ಲೂಕುಗಳನ್ನು ಕಮ್ಯೂನ್‍ಗಳೆಂಬ ಉಪ ಆಡಳಿತ ವಿಭಾಗಗಳನ್ನಾಗಿ ವಿಂಗಡಿಸಿದ್ದು ಪ್ರತಿ ಕಮ್ಯೂನಿನಲ್ಲಿಯೂ ಉತ್ಪಾದನಾ ದಳಗಳಿರುತ್ತವೆ. ಪ್ರತಿ ದಳವನ್ನೂ ಚಿಕ್ಕ ಉತ್ಪಾದನಾ ತಂಡಗಳನ್ನಾಗಿ ವಿಭಾಗಿಸಿದ್ದು ಪ್ರತಿಯೊಂದು ತಂಡದಲ್ಲಿಯೂ 20-40 ಮನೆಗಳಿರುತ್ತವೆ. ಉತ್ಪಾದನಾ ದಳಗಳು ಭೂಮಿಯ ಒಡೆತನವನ್ನು ಹೊಂದಿದ್ದು ಗ್ರಾಮವಾಸಿಗಳಿಗೆ ರಾಜಕೀಯ ಮತ್ತು ಆರ್ಥಿಕ ಸಲಹೆಗಳನ್ನು ನೀಡುತ್ತವೆ. 

	1950ರಿಂದೀಚೆಗೆ ಹುಟ್ಟಿದವರಲ್ಲಿ ಅನರಕ್ಷರತೆಯನ್ನು ನಿರ್ಮೂಲಗೊಳಿಸಲಾಗಿದೆ. ಗ್ರಾಮೀಣ ಕಮ್ಯೂನುಗಳು ಹಾಗೂ ಕಾರ್ಖಾನೆಗಳು ಪ್ರಾಥಮಿಕ ಮತ್ತು ಸೆಕೆಂಡರಿ ವಿದ್ಯಾಭ್ಯಾಸ ನೀಡುತ್ತವೆ. ಅಮಾಯ್ ವಿಶ್ವವಿದ್ಯಾಲಯ ಉನ್ನತ ವಿದ್ಯಾಭ್ಯಾಸದ ಪ್ರಮುಖ ಕೇಂದ್ರ. ಫೂಚೌನಲ್ಲಿ ಫೂಚೌ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜು, ಕೃಷಿ ವಿದ್ಯಾಲಯ ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ ಇವೆ. 

	ಆರ್ಥಿಕ ಪರಿಸ್ಥಿತಿ: 1952ರಿಂದೀಚೆಗೆ ಫೂಕ್ಯೆನ್ ಪ್ರಾಂತ್ಯ ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಆದರೆ ಪಾಶ್ಚಾತ್ಯ ರಾಷ್ಟ್ರಗಳೊಡನೆ ಹೋಲಿಸಿದರೆ ಇದರಲ್ಲಿರುವ ಪೋಷಕಾಂಶಗಳ ಗುಣಮಟ್ಟ ಕಡಿಮೆಯೆಂದೇ ಹೇಳಬಹುದು. ಇಲ್ಲಿ ವ್ಯವಸಾಯಯೋಗ್ಯ ಭೂಮಿ ಕಡಿಮೆಯಿದ್ದು ಭೂ ಅವಲಂಬಿತ ಜನಸಂಖ್ಯೆ ಶೇಕಡಾ 80ರಷ್ಟು ವ್ಯವಸಾಯನಿರತರಿಗೆ ಇರುವ ಸರಾಸರಿ ಭೂಮಿ ಕೇವಲ 1/4 ಎಕರೆ. ಇಲ್ಲಿಯ ಅರಣ್ಯಗಳಲ್ಲಿ ಬೆಲೆಬಾಳುವ ಫರ್ ಪೈನ್ ಮತ್ತು ರೋಸ್‍ವುಡ್ ಮರಗಳಿವೆ. ಟೀ ಸೊಪ್ಪನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಲ್ಲಿಯ ವೈಶಿಷ್ಟ್ಯವಾದ ಹೂಗಳ ಸುವಾಸನೆಯಿಂದ ಕೂಡಿದ ಟೀ ಸೊಪ್ಪನ್ನು ತಯಾರಿಸುವ 50 ಕಾರ್ಖಾನೆಗಳೂ ಬೊಂಬಿನಿಂದ ಕಾಗದ ತಯಾರಿಸುವ ಕಾರ್ಖಾನೆಗಳೂ ಇಲ್ಲಿವೆ. ಫೊಕ್ಯೆನಿನಲ್ಲಿ ಕಲ್ಲಿದ್ದಲು, ಕಬ್ಬಿಣ, ತಾಮ್ರ, ಚಿನ್ನ, ಗ್ರಾಫೈಟ್ ಮತ್ತು ಪಿಂಗಾಣಿ ಸಾಮಾನುಗಳ ತಯಾರಿಕೆಯಲ್ಲಿ ಉಪಯೋಗಿಸುವ ಚೀನೀ ಜೇಡಿಮಣ್ಣು ಸಿಗುತ್ತವೆ. 

	ಫೂಕ್ಯೆನಿನ ನದಿಗಳನ್ನು ಸಂಚಾರಕ್ಕಾಗಿ ಬಳಸಲಾಸುತ್ತದೆ. ಚೆನ್ ಚಿ ನದಿಯಲ್ಲಿ ಉ-ಇ-ಷಾನ್ ವರೆಗೆ ಸಣ್ಣದೋಣಿಗಳು ಸಂಚರಿಸಲು ಸಾಧ್ಯವಿದೆ. ನದಿಗಳ ಮೂಲಕ ಟೀ ಸೊಪ್ಪನ್ನು ಸಾಗಿಸಲಾಗುತ್ತದೆ. ಕೊರಿಯನ್ ಯುದ್ದ ಮತ್ತು ಅಮೆರಿಕ ಹಾಗೂ ಚೀನೀ ರಾಷ್ಟ್ರೀಯ ಸೈನ್ಯಗಳಿಂದ ಫೂಕ್ಯೆನ್ ತೀರದ ತಡೆಗಟ್ಟುವಕೆಯ ಅನಂತರ ಸಾಗರೋತ್ತರ ವ್ಯಾಪಾರ ಕುಂಠಿತವಾಗಿ ಫೂಕ್ಯೆನಿನ ವ್ಯಾಪಾರ ಒಳನಾಡಿನಲ್ಲೇ ಹೆಚ್ಚಾಗಿದೆ. ಪ್ರಾಂತ್ಯದಲ್ಲಿ ಸಾಕಷ್ಟು ರೈಲುಮಾರ್ಗಗಳಿದ್ದು ಫೂಚೌನಲ್ಲಿ ಮುಖ್ಯ ವಿಮಾನನಿಲ್ದಾಣವಿದೆ. 
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ